Sunday, 25 December 2011

ಹೊಸ ದಾರಿ, ಹೊಸ ವರ್ಷ

ದಿಟವಾಗಲಿ ಕರೆ 
ಪುಟಿದೇಳಲಿ ಮನ 
ತಡವೇತಕೆ ನಿಲುವು 
ಮನದೇಗುಲ ಬೆಳಕಾಗಲಿ 
ಜಗದೆಲ್ಲಡೆ ಒಲವು 

ಮಡುಕಟ್ಟಿದ ಹಳೆನೀರದು 
ಮಡಿಯಾಗಲಿ ಬೆಂದು 
ತನುವಾಗಲಿ ಹದ ಭೂಮಿಯು 
ಹೊಸ ನೀರಲಿ ಮಿಂದು 

ಅದೇ ಸೂರ್ಯಮ, ಅದೇ ಚಂದ್ರಮ 
ಇದೆ ಭೂಮಿಯು ಸಹಜ 
ಬದಲಾವಣೆ  ಬೇಕಾಗಿದೆ 
ಮನುರಾಜನ ತನುಜ 

ನಿಜದರ್ಥದಿ ಪರಕೀಯವು, ಪರಕಾಯವು 
ಪರದೈವವೆ ಇಲ್ಲ
ಅವ ನಮ್ಮವ, ಜಗ ನಮ್ಮದು 
ಅನಿಕೇತನರೆಲ್ಲ 

  

Tuesday, 1 November 2011

ನಾಡ ಬೆಳಸಿ

ತಾಯ ಒಡಲೊಳು 
ಭಾವದ ನೂರೆಂಟು ಕೊಠಡಿ 
ಜೀವ ನಾವಿಗೆಯಲಿ 
ದಿನವು ಭಾವ ಲಹರಿ 

ಭೀಕರ ಕಾರ್ಮೋಡಗಳ ಬಿಟ್ಟು ಓಡಿ, 
ತೆಳು ಮೋಡವಾರಿತು   
ಒಣಭೂಮಿ ನೋಡಿ 
ವಾತ್ಸಲ್ಯವೆಂಬುದು ಅಬ್ಬರವು ಅಲ್ಲ 
ಹನಿ ನೀರ ಕುಡಿದ ಕುಡಿಯೇ ಇದ ಬಲ್ಲ 

ಭುವಿಗೆ ಕಾಲನೂರಿ, ಭಾನ್ದಳವನು ತೋರಿ,
ಹಕ್ಕಿಯಾಗೆನ್ದಳು ತಾಯಿ ನಮಗೆ 
ಕೋಳಿ-ಕೋಗಿಲೆ, ಕಾಗೆ-ಗುಬ್ಬಿ, ಭಾತು-ಹದ್ದು 
ಆರಸಿಕೋ ಮಗು ನಿನಗ್ಯಾವುದು ಬೇಕು ಅದೇ ಮದ್ದು 


ತಾಯೆ,  ನಿನ್ನ ನಗೆ ಹಲವು ಬಗೆ
ಇಲ್ಲಿ ಜನ್ಮವದೆ ಧನ್ಯವು;
ಸುರಿದ ಮಳೆ, ಹರಿವ ಜಲ,
ಭಾಷೆ ಅದು ಜೊನ್ನ ರಾಶಿ 
ಬಿಡು ಉಳಿಸುವ  ಮಾತ; 
ಮುಂದಿರುವುದು ಬೆಳಸುವ ಮಾತೊಂದೆ  


Wednesday, 31 August 2011

ಹುಡುಕಾಟ

ನನ್ನ ನಾ ಕಾಣಬೇಕೆಂದು ಬೆಳಗ್ಗಯೇ ಎದ್ದು 
ಪೂರ್ವಾಭಿಮುಖವಾಗಿ ಭೂಮಿಯ ತುದಿಯವರೆಗೆ ಹೋಗಬೇಕೆಂದು ನಡೆದೆ
ಸೂರ್ಯ ಮೇಲೆರುತ್ತಲಿದ್ದ, ದಿಕ್ಕು ಬದಲಿಸಬೇಕಾಯ್ತು


Thursday, 18 August 2011

ಬನ್ನಿ ಬನ್ನಿ ಸಾಗುವ







ಸುತ್ತುವರಿದ ಹತ್ತು ಕಣ್ಣೆ
ಮತ್ತದೇಕೆ ನಿಲುಗಡೆ
ಸತ್ತು ಹೋಯ್ತು ನೆನ್ನೆ, ನೆನ್ನೆ
ಇಂದು ನಿನ್ನ ಬಿಡುಗಡೆ

ಚಿಂತೆಯಂತೆ, ಸಂತೆಯಂತೆ
ಕಷ್ಟ ಬಾಳೆ ಪುಷ್ಟಿಯು
ನಿಷ್ಠೆ ಹಿಂದೆ, ಸ್ಪಷ್ಟ  ಮುಂದೆ
ಇಷ್ಟ ಪಟ್ಟು ನಡೆ ನಡೆ

ದಯೆಯೆ ಬ್ರಹ್ಮ, ಭ್ರಮೆಯೇ ಮರ್ಮ
ಕ್ರಿಯೆಯೆ ಜೀವಧರ್ಮವು
ಜಗವ ನಾವು ಬಳಸಿ  ಬರುವ
ಹೆರುವ ದಿಟ್ಟ ನಡೆ ನುಡಿ

ಬನ್ನಿ ಬನ್ನಿ; ನಾವು ಮುಂದು ನೀವು ಮುಂದು
ಎಲ್ಲ ಒಂದೆ ಸಾಗುವ 
ಆತ್ಮವನ್ನ ಬೆಳಸಲಿಕ್ಕೆ 
ಪರಮಾತ್ಮನನ್ನು  ಕೊಲ್ಲುವ

ಅರ್ಥ ನಾನಾರ್ಥ






ಮತ್ತದೇ ಕೂಗು, ಹಿಂಬದಿಯ ಆಲಾಪ
ಒಮ್ಮೆಲೇ ಉಕ್ಕುವ ಉತ್ಸಾಹ
ಮಧ್ಯೆ  ಉಲ್ಭಣಿಸುವ ಆಕ್ರಂಧನ

ಹಾರಾಡುತ್ತಿದ್ದ ಬರಡು ಮೋಡಗಳು
ಹುಗಿದ ನಾಲ್ಕ್ಹನಿಗಳು
ಬೆತ್ತಲೆ ಮನದಲ್ಲಿ ಮೂಡಿದ ನುಡಿಮುತ್ತುಗಳು 

ಇಂಪು ಕಾಣದ ಹೃದಯದ
ಕಂಗಳಲಿ ತಂಪು ಕಂಬನಿಗಳು
ಬೆಂಕಿ ಬಿದ್ದ ನಾಡಿನಲ್ಲೂ ನಗುವ ಬೆಳದಿಂಗಳು

ಅಬ್ಬಾ!!! ಸ್ವಪ್ನವಲ್ಲದ, ಸ್ಪಷ್ಟವಿಲ್ಲದ ಬದುಕು
ಅರಿತೋ, ಅರಿಯದೆಯೋ ನಡೆದ ಬಾಳುಮೆ
ನಾನಾರ್ಥವಡಗಿದೆ ದಿನವು ರಂಗಭೂಮಿ 




Tuesday, 8 February 2011

ದೀಪದ ಹಣ್ಣು

ನಿಧಿಯಿದೆ ಮನೆಯೊಳಗೆ ಅಗೆಯುವವರಿಲ್ಲ
ಬೆಳೆಯಿದೆ ಜಗದೊಳಗೆ ಕೊಯ್ವವರೇ ಇಲ್ಲ
ಹದವಿರುವ ಹೃದಯವಿದೆ ಮೊಗ ನಗಲೆ ಇಲ್ಲ
ಜಗದಾತ್ಮನ ಇಹವು ಸುಖ ಕಾಣಲಿಲ್ಲ

ದೇವನಿರುವನೋ ಏನೋ ಜನ ತಿಳಿಯಲಿಲ್ಲ
ಮಲಗಿರುವ ಮನದ ದೈವನೇಳಬೇಕಲ್ಲ
ಇರುವುದನ ಪ್ರಶ್ನಿಸುವ ಎದೆಗಾರಿಕೆ ಇಲ್ಲ
"ಕೊಲ್ಲಲು ದೇವನನು ಧೈರ್ಯವಿಲ್ಲ"
ತಿಳುವಳಿಕೆ ಇಲ್ಲದ ಬಾಳಾಯಿತಲ್ಲ

ಸ್ವಚ್ಛ ಕನ್ನಡಿ ಒಡೆದು ಹುಚ್ಚಾಯಿತಲ್ಲ
ಕಿಚ್ಚು ಪಾಶ್ಚಿಮವರಡಿ ಧರ್ಮವೇ ಇಲ್ಲ
ಧರಣಿ ಮಂಡಲ ಗೋವು ತಿರುಗಿ ಬರಲಿಲ್ಲ
ಸತ್ತು ಬದುಕಿದ ಬವಣೆ ನಮದಾಗಿತಲ್ಲ

ಬದಲಾವಣೆ ಮತ್ತೆ ತಿರುಗಿ ಬರಲಣ್ಣ
ಭಾವಾಗ್ನಿ ಹುಕ್ಕಿ ತೆರೆಯಲೀ ಕಣ್ಣ
ಕಂಪ ಸೂಸಲಿ ಭೂ ತಾಯ ಮಣ್ಣು
ಪ್ರತಿ ಜೀವಿಗೆ ಸಿಗಲಿ ದೀಪದ ಹಣ್ಣು

Friday, 7 January 2011

ಮೋಕ್ಷ

ಉತ್ತುಂಗದೊಳು ನಿಂತು, ಮತ್ತಾನ್ಗನನು ಸುತ್ತಿ
ಗತ್ತುನುಡುಗೆಯ ಉಟ್ಟಡೆ
ಚಿತ್ತದೊಳು ಚಿಳುಮೆಯಿದೆಯೆನ್ದಲ್ಲ

ಮಣ್ಣಿನೊಳಗೂಳಿದರು ಮತ್ತೆ ಮೊಳೆವೆನೆಂಬ ಛಲವಿದ್ದೊಡೆ
ಅಂಧಾನುಕರಣೆ ಅಟ್ಟಿ ಮುಂದಾಗಿ ನಡೆದೊಡೆ
ಚಂದನದ ಗೊಂಬೆಯಾಗುವೆ ನೀನು ಚಂದಮಾಮ